ಬ್ರಹ್ಮಾವರ ವಲಯ ನಡೆದು ಬಂದ ದಾರಿ ...

      ಎಸ್.ಕೆ.ಪಿ.ಎ ಬ್ರಹ್ಮಾವರ ವಲಯಕ್ಕೆ ಈಗ ಹದಿನೆಂಟರ ತುಂಬು ಹರೆಯ. ತನ್ನ ಬಾಲ್ಯ, ಕೌಮಾರ್ಯಗಳನ್ನು ಕಳೆದು ತುಂಬು ಯವ್ವನದ ಪ್ರಾಪ್ತ ವಯಸ್ಸು ಜಿಲ್ಲಾ ಸಂಘಟನೆಯ ಪಡಿನೆರಳಲ್ಲಿ 118 ಸದಸ್ಯ ಬಲದ ಅದರಲ್ಲೂ 25 ಮಂದಿ ಅಜೀವ ಸದಸ್ಯರನ್ನೊಳಗೊಂಡು ಈಗಾಗಲೇ ತನ್ನ ಉತ್ತಮ ಚಟುವಟಿಕೆಗಳಿಂದ ಗಟ್ಟಿಯಾದ ಅಸ್ತಿತ್ವವನ್ನು ಕಂಡುಕೊಂಡಿದೆ. ಹಲವಾರು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಕ್ರೀಡೆ, ಸಾಂಸ್ಕೃತಿಕ, ಛಾಯಾಗ್ರಹಣದ ಕಾರ್ಯಾಗಾರಗಳು, ಛಾಯಾಚಿತ್ರ ಪ್ರದರ್ಶನಗಳು ಸದಸ್ಯರು ಆರೋಗ್ಯಕ್ಕೆ ತೊಂದರೆಗೊಳಗಾದಾಗ ಮತ್ತು ಸಾಮಾಜಿಕವಾಗಿ ತೊಂದರೆಗೊಳಗಾದಾಗ ಸಂಘಟನೆಯ ನೆರವು ಹೀಗೆ ಹತ್ತು ಹಲವು ಕಾರ್ಯ ಚಟುವಟಿಕೆಯ ಮೂಲಕ ಬಲವಾದ ಹೆಜ್ಜೆಯ ಗುರುತನ್ನು ದಾಖಲಿಸಿದ್ದೇವೆ.
      ಎಲ್ಲಾ ಛಾಯಾಗ್ರಾಹಕರು ಒಂದೇ ಸೂರಿನಡಿಯಲ್ಲಿ ಸಂಘಟಿತರಾಗಬೇಕೆಂಬ ನೆಲೆಯಲ್ಲಿ ಜಿಲ್ಲಾ ಛಾಯಾಗ್ರಾಹಕರ ಸಂಘವನ್ನು ಹುಟ್ಟು ಹಾಕಿ ಸಂಘಟಿಸಿದವರು ಆರ್.ಬಿ. ಸನಿಲ್ ರವರು ಹತ್ತು ವರ್ಷಗಳ ಕಾಲ ಅಧ್ಯಕ್ಷರಾಗಿ ಸಂಘವನ್ನು ಬಲಪಡಿಸಿ ದಶಮಾನೋತ್ಸವ ಆಚರಿಸಿ ಮುನ್ನಡೆಸಿದವರು. ಅದುವರೆಗೆ ಉಡುಪಿ ವಲಯದೊಂದಿಗೆ ವಿಲೀನವಾಗಿದ್ದ ಬ್ರಹ್ಮಾವರ ವಲಯವು ಮುಂದೆ ಉಡುಪಿಯವರೇ ಆಗಿದ್ದ ಸುಂದರ ಪುತ್ರನ್ ರವರು ಜಿಲ್ಲಾಧ್ಯಕ್ಷರಾಗಿದ್ದು, ಜಯಕಾರ ಸುವರ್ಣರವರು ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ವಲಯಗಳನ್ನು ಬಲಪಡಿಸಬೇಕೆಂಬ ಉದ್ದೇಶದಿಂದ ಬ್ರಹ್ಮಾವರ ವಲಯವನ್ನು ಸ್ಥಾಪಿಸಬೇಕೆಂಬ ನೆಲೆಯಲ್ಲಿ ಆಗಿನ ಉಡುಪಿ ವಲಯದ ಅಧ್ಯಕ್ಷರಾಗಿದ್ದ ರಾಘವ ಪದ್ಮಶಾಲಿ, ಕೃಷ್ಣ ಮಲ್ಪೆ ಮುಂತಾದ ಹಿರಿಯರು ಸೇರಿಕೊಂಡು, ಬ್ರಹ್ಮಾವರದ ಎ.ಸಿ. ಶೇಖರ್, ದಾಮೋದರ್ ಶೆಟ್ಟಿಗಾರ್ ಮೊದಲಾದ ಹಿರಿಯ ಛಾಯಾಗ್ರಾಹಕರ ನೆರವಿನಿಂದ ಬ್ರಹ್ಮಾವರ ವಲಯವನ್ನು 2001 ರಲ್ಲಿ ಪ್ರಾರಂಭಿಸಿದರು. ಪ್ರಾರಂಭದಲ್ಲಿ 15 ರಿಂದ 20 ಸದಸ್ಯರ ಬಲದೊಂದಿಗೆ ದಾಮೋದರ್ ಶೆಟ್ಟಿಗಾರ್ ಸ್ಥಾಪಕಾಧ್ಯಕ್ಷರಾಗಿ ಮಾರ್ಷಲ್ ಡಿ'ಸೋಜಾರವರು ಕಾರ್ಯದರ್ಶಿಯಾಗಿ ಬ್ರಹ್ಮಾವರ ವಲಯವು ಸ್ಥಾಪನೆಗೊಂಡಿತು.

ಆಂತರಿಕ ಕಾರ್ಯ ಚಟುವಟಿಕೆಗಳು

      ಬೆರಳೆಣಿಕೆಯ 8 - 10 ಸದಸ್ಯರಿಂದ ಪ್ರಾರಂಭಗೊಂಡ ಬ್ರಹ್ಮಾವರ ವಲಯವು ಇಂದು ಸುಮಾರು 120 ಸದಸ್ಯ ಬಲವನ್ನು ಹೊಂದುವಲ್ಲಿ ಸಶಕ್ತವಾಗಿ ಬಲಗೊಂಡಿದೆ. ವಲಯದ ಎಲ್ಲಾ ಸ್ಟುಡಿಯೋಗಳಿಗೆ ಭೇಟಿ ನೀಡಿ, ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ಸದಸ್ಯ ಬಲವನ್ನು ವೃದ್ಧಿ ಪಡಿಸಿದಲ್ಲದೆ, ದರದ ಪಟ್ಟಿಯಲ್ಲಿ ಏಕರೂಪತೆ ಇರುವಂತೆ ಪ್ರಯತ್ನಿಸಲಾಯಿತು. ದರದ ವಿಷಯದಲ್ಲಿ ಸದಸ್ಯರಲ್ಲಿ ಬಿನ್ನಾಭಿಪ್ರಾಯ ಉಂಟಾದಾಗ ಅದನ್ನು ಬಗೆಹರಿಸುವಲ್ಲಿ ಶ್ರಮಿಸಲಾಯಿತು. ಸದಸ್ಯರಿಗೆ ಅನಾರೋಗ್ಯ ಅಥವಾ ಅಪಘಾತಗಳು ಸಂಭವಿಸಿದಾಗ ಭೇಟಿ ನೀಡಿ ಸಾಂತ್ವನ ಹೇಳಿ, ಧನಸಹಾಯವನ್ನು ನೀಡಿ ಸಹಕರಿಸಿದ್ದೇವೆ. ಸದಸ್ಯರಿಗೆ ಸಾಮಾಜಿಕವಾಗಿ ತೊಂದರೆ ಉಂಟಾದಾಗ ಅದನ್ನು ಬಗೆಹರಿಸುವಲ್ಲಿ, ಸಂಘವು ಸಹಕರಿಸಿದೆ. ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗೌರವಿಸಿ, ವಿದ್ಯಾನಿಧಿಯನ್ನು ಸಮರ್ಪಿಸುವುದು, ಪ್ರತಿಭಾವಂತ ಪ್ರಶಸ್ತಿ ವಿಜೇತ ಛಾಯಾಗ್ರಾಹಕರನ್ನು ಗುರುತಿಸಿ ಗೌರವಿಸುವುದು, ಸದಸ್ಯರಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸುವುದು, ಸದಸ್ಯರಿಗಾಗಿ ಛಾಯಾಗ್ರಹಣ ತರಬೇತಿ ಕಾರ್ಯಗಾರಗಳನ್ನು ಏರ್ಪಡಿಸುವುದು, ಸದಸ್ಯರ ವಿಶೇಷ ಛಾಯಾಚಿತ್ರಗಳ ಪ್ರದರ್ಶನಗಳನ್ನು ಅನ್ಯ ಸಂಘಟನೆಗಳೊಂದಿಗೆ ಸೇರಿ ಏರ್ಪಡಿಸುವುದು, ಛಾಯಾಚಿತ್ರ ಸ್ಪರ್ಧೆಗಳನ್ನು ಏರ್ಪಡಿಸುವುದು, ಕಾರ್ಯಕಾರಿ ಸಮಿತಿ ಮತ್ತು ಸರ್ವಸದಸ್ಯರ ಸಭೆ ಕರೆದು ಸಂಘಟನೆಯ ಬೆಳವಣಿಗೆಯ ಬಗ್ಗೆ ಚರ್ಚಿಸಿ, ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವುದು, ಹೀಗೆ ಹಲವಾರು ಚಟುವಟಿಕೆಗಳನ್ನು ಈ ಹದಿನೇಳು ವರ್ಷಗಳಿಂದ ನಡೆಸಿಕೊಂಡು ಬಂದಿದೆ.

ಸಮಾಜಮುಖಿ ಕಾರ್ಯಕ್ರಮಗಳು

      ಈ 17 ವರ್ಷಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಮ್ಮ ಸಂಘಟನೆ ಮತ್ತು ಇತರ ಸಂಘಟನೆಗಳೊಂದಿಗೆ ಸೇರಿ ಜಂಟಿಯಾಗಿ ಕಾರ್ಯಚಟುವಟಿಕೆಗಳನ್ನು ನಡೆಸಿದೆ. ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅವರಿಗೆ ಅಕ್ಕಿ, ಹಣ್ಣು-ಹಂಪಲು, ಬಟ್ಟೆ ಹಾಗೂ ಧನಸಹಾಯ ನೀಡುವುದು, ಶಿಕ್ಷಕರ ದಿನಾಚರಣೆಯಂದು ಹಿರಿಯ ಶಿಕ್ಷಕರನ್ನು ಅವರ ಮನೆಗೆ ತೆರಳಿ ಸನ್ಮಾನಿಸುವುದು, ವಿಶ್ವ ಛಾಯಾಗ್ರಹಣ ದಿನದಂದು ಹಿರಿಯ ಛಾಯಾಗ್ರಾಹಕರನ್ನು ಗುರುತಿಸಿ ಗೌರವಿಸುವುದು, ಕಡುಬಡತನದಲ್ಲಿರುವ ಅನಾರೋಗ್ಯ ಪೀಡಿತರಿಗೆ ಧನಸಹಾಯ, ರಕ್ತದಾನ ಶಿಬಿರಗಳಲಿಲಿ ಭಾಗವಹಿಸುವುದು, ಉಚಿತ ವೈದ್ಯಕೀಯ ಶಿಬಿರಗಳನ್ನು ಅನ್ಯ ಸಂಘಟನೆಗಳೊಂದಿಗೆ ಸೇರಿ ನಡೆಸುವುದು, ಮಕ್ಕಳ ಸಾಂಸ್ಕೃತಿಕ, ಶೈಕ್ಷಣಿಕ ಕ್ರೀಡಾ ಶಿಬಿರ ಹಾಗೂ ಕಾರ್ಯಕ್ರಮಗಳನ್ನು ಪ್ರಾಯೋಜಿಸುವುದು, ಸಾಮಾಜಿಕ ಹೋರಾಟಗಳಲ್ಲಿ ಅನ್ಯ ಸಂಘಟನೆಯೊಂದಿಗೆ ಭಾಗವಹಿಸುವುದು ಹೀಗೆ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಸಂಘವು ತೊಡಗಿಸಿಕೊಂಡಿದೆ. ಅದರಲ್ಲೂ ದಶಮಾನೋತ್ಸವ ಸಂದರ್ಭದಲ್ಲಿ ಸಮಾಜಮುಖಿ ದಶ ಕಾರ್ಯಕ್ರಮಗಳ ಮೂಲಕ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ.

ಆರ್ಥಿಕ ಕ್ರೋಡೀಕರಣ ಕಾರ್ಯಕ್ರಮಗಳು

      ಸಂಘದ ಆರ್ಥಿಕ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. 2007 ರಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟನ್ನು ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ಯಶಸ್ವಿಯಾಗಿ ಸಂಘಟಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದು ಅಲ್ಲದೇ ಸಂಘವು ಆರ್ಥಿಕವಾಗಿ ಸದೃಡಗೊಳ್ಳುವಂತೆ ಮಾಡಿದ್ದೇವೆ. 2015 ರಲ್ಲಿ "ಗುರು-ಶಿಷ್ಯರು" ಎಂಬ ಹಾಸ್ಯಮಯ ಯಕ್ಷಗಾನವನ್ನು ಏರ್ಪಡಿಸಿ, ಉತ್ತಮ ಹಣ ಸಂಗ್ರಹದೊಂದಿಗೆ ಎಲ್ಲರ ಪ್ರಶಂಸೆಗೆ ಕಾರಣವಾಯಿತು. 2018 ರಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಎಸ್.ಕೆ.ಪಿ.ಎ - ಟ್ರೋಫಿಯನ್ನು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಸಂಘಟಿಸಿ ಯಶಸ್ವಿಯಾಗಿ ನೆರವೇರಿದೆ.

ಜಿಲ್ಲಾ ಸಂಘಟನೆಯ ಸಾಂಗತ್ಯದಲ್ಲಿ

      ಎಸ್.ಕೆ.ಪಿ.ಎ ಜಿಲ್ಲಾ ಸಂಘಟನೆಯೊಂದಿಗೆ ನಮ್ಮ ಬ್ರಹ್ಮಾವರ ವಲಯವು ಸಂಘಟನೆಯ ಆಶಯ ನೀತಿ-ನಿಯಮ ಕಾರ್ಯ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಭಾಗವಹಿಸಿ ಅಲ್ಲಿ ಚರ್ಚೆಗೊಂಡ ವಿಚಾರ ಹಾಗೂ ಕಾರ್ಯಕ್ರಮಗಳನ್ನು ವಲಯದ ಸದಸ್ಯರಿಗೆ ತಿಳಿಸಿ ಕಾರ್ಯಕ್ರಮಗಳನ್ನು ರೂಪಿಸುವುದು, ಜಿಲ್ಲಾ ಮಹಾಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು, ಅನ್ಯ ವಲಯಗಳ ಪದಗ್ರಹಣ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು, ಜಿಲ್ಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ನಮ್ಮ ವಲಯವು ಪಡೆದುಕೊಂಡಿದೆ. ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದೆ, 2007 - 08 ರಲ್ಲಿ ಜಿಲ್ಲಾ ವಾರ್ಷಿಕ ಮಹಾಸಭೆಯಲ್ಲಿ ಅತ್ಯುತ್ತಮ ವಲಯ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಪಡೆದುಕೊಂಡಿದೆ.ಜಿಲ್ಲಾ ರಜತ ಮಹೋತ್ಸವ ಸಂದರ್ಭದಲ್ಲಿ ನಮ್ಮ ವಲಯದ ಗೌರವ ಅಧ್ಯಕ್ಷರಾದ ಎ.ಸಿ ಶೇಖರ ಅವರಿಗೆ ಹಿರಿಯ ಛಾಯಾಗ್ರಾಹಕರೆಂಬ ನೆಲೆಯಲ್ಲಿ ಗೌರವಿಸಿದ್ದಾರೆ. ನಮ್ಮ ವಲಯದ ಸದಸ್ಯರಾದ ಪ್ರತೀಶ್ ಕುಮಾರ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಜಿಲ್ಲಾ ಸಂಘಟನೆಯ ಕ್ರಿಕೆಟ್ ತಂಡದಲ್ಲಿ ನಮ್ಮ ವಲಯದ ಕ್ರೀಡಾ ಕಾರ್ಯದರ್ಶಿ ಪ್ರಕಾಶ ಜತ್ತನ ರವರು ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಜಿಲ್ಲಾ ಕ್ರೀಡಾಕೂಟ ಆಯೋಜನೆ

      ಈ ಬಾರಿಯ ಜಿಲ್ಲಾ ಕ್ರೀಡಾಕೂಟ - 2018 "ಮಾನ್ಸೂನ್ ಗ್ರಾಮೀಣ ಕ್ರೀಡಾಕೂಟ"ವನ್ನು ನಡೆಸುವರೆ ಬ್ರಹ್ಮಾವರ ವಲಯಕ್ಕೆ ಅವಕಾಶ ದೊರೆತಿದ್ದು, ಅದನ್ನು ಬಹಳ ಉತ್ತಮವಾಗಿ ನಡೆಸಿದ್ದೇವೆ ಎನ್ನುವ ತೃಪ್ತಿ ನಮಗಿದೆ. ಬ್ರಹ್ಮಾವರ ಎಸ್.ಎಂ.ಎಸ್ ಕ್ರೀಡಾ ಮೈದಾನದಲ್ಲಿ ಸೆಪ್ಟೆಂಬರ್ 9 ರಂದು ನಡೆದ ಈ ಜಿಲ್ಲಾ ಕ್ರೀಡಾಕೂಟ ಮತ್ತು ವಾಹನ ಜಾಥಾದಲ್ಲಿ ಜಿಲ್ಲೆಯ ಅತೀ ಹೆಚ್ಚಿನ ಸದಸ್ಯರು ಭಾಗವಹಿಸಿ, ಯಶಸ್ವಿಗೊಳಿಸಿ, ಬ್ರಹ್ಮಾವರ ವಲಯದ ಸಂಯೋಜನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
      ಬ್ರಹ್ಮಾವರ ವಲಯದ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಸಹಕಾರ, ಪ್ರೋತ್ಸಾಹ ನೀಡಿದ ಜಿಲ್ಲಾ ಸಂಘಟನೆ ಮತ್ತು ನಮ್ಮ ವಲಯದ ಎಲ್ಲಾ ಸದಸ್ಯ ಮಿತ್ರರಿಗೂ ಧನ್ಯವಾದವನ್ನು ತಿಳಿಸುತ್ತಾ ಮುಂದೆಯೂ ಕೂಡ ಇದೇ ರೀತಿಯ ಸಹಕಾರ, ಸಹಾಯವನ್ನು ಬಯಸುತ್ತಾ ಎಲ್ಲರಿಗೂ ವಂದನೆಗಳು.

Show more (+)