ಮೂಡುಬಿದಿರೆ ವಲಯವು ನಡೆದು ಬಂದ ದಾರಿ ...

      "ಮೂಡುಬಿದಿರೆ" ಕವಿ ರತ್ನಾಕರವರ್ಣಿಯ ತವರೂರು. ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್ ನಿಂದ ಇಂದು ಸಾಂಸ್ಕೃತಿಕ ರಾಜಧಾನಿಯಾಗಿ ಜಗತ್ತಿನ ಗಮನ ಸೆಳೆಯುತ್ತಿರುವ ನಗರ. 18 ಕೆರೆ, 18 ಬಸದಿ, 18 ದೇವಸ್ಥಾನ (18 ಬೇರೆ ವಿವರ) ಇಲ್ಲಿನ ಪ್ರಮುಖ ಆಕರ್ಷಣೆ. ಹಲವು ಪ್ರವಾಸಿ ಆಕರ್ಷಣೀಯ ತಾಣಗಳನ್ನು ಹೊಂದಿರುವ ಮೂಡುಬಿದಿರೆ ಪ್ರಾಕೃತಿಕವಾಗಿ ಬಹಳ ಸಂಪತ್ಭರಿತ ನಗರ.
      ಶೈಕ್ಷಣಿಕವಾಗಿ ಬಹಳ ಮುಂದುವರೆದಿರುವ ನಮ್ಮ ಹೆಮ್ಮೆಯ ಮೂಡುಬಿದಿರೆ, ಹಲವು ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್, ಸ್ಥಳೀಯ-ರಾಜ್ಯ-ದೇಶ-ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಮೆಚ್ಚಿನ ಶೈಕ್ಷಣಿಕ ನಗರ. ದಿನೇ ದಿನೇ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ. ಹತ್ತಾರು ಅಂತರಾಷ್ಟ್ರೀಯ ಮಟ್ಟದ ಸಂಘ ಸಂಸ್ಥೆಗಳಿರುವ, ನೂರಾರು ಸ್ಥಳೀಯ ಸಂಘ ಸಂಸ್ಥೆಗಳಿರುವ ಮೂಡುಬಿದಿರೆಯಲ್ಲಿ ಛಾಯಾಗ್ರಾಹಕರಿಗಾಗಿ ಒಂದು ಬಲಿಷ್ಠ ಸಂಘಟನೆಯ ಅಗತ್ಯತೆಯನ್ನು ಮನಗಂಡು ಹಿರಿಯ ಛಾಯಗ್ರಾಹಕರ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಛಾಯಾಗ್ರಾಹಕರ ಹಿತದೃಷ್ಠಿಯಿಂದ ವೃತ್ತಿಪರ ಛಾಯಾಗ್ರಾಹಕರಿಂದ ವೃತ್ತಿಪರ ಛಾಯಾಗ್ರಾಹಕರಿಗಾಗಿ ಆರಂಭಗೊಂಡಿದ್ದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ.) ಸಂಘಟನೆ ನಮ್ಮ ವಲಯದಲ್ಲಿ ದಿನಾಂಕ 19-04-2011 ರಂದು ಉದ್ಘಾಟನೆಗೊಂಡಿತು. ಆರಂಭದ ವರ್ಷದಲ್ಲಿ ಅಧ್ಯಕ್ಷರಾಗಿ ಭಾನುಪ್ರಕಾಶ್ ರಾವ್, ಕಾರ್ಯದರ್ಶಿಯಾಗಿ ವಿಲ್ಫ್ರೆಡ್ ಮೆಂಡೋನ್ಸಾ ಮತ್ತು ಕೋಶಾಧಿಕಾರಿಯಾಗಿ ಸತೀಶ್ ಆಯ್ಕೆಯಾಗಿದ್ದರು. ಆರಂಭದ ವರ್ಷದಲ್ಲಿ ಮೂಡುಬಿದಿರೆಯ ಎಲ್ಲಾ ಸದಸ್ಯರನ್ನು ಭೇಟಿ ಮಾಡಿ 42 ಸದಸ್ಯರನ್ನು ಸಂಘಕ್ಕೆ ಸೇರ್ಪಡೆ ಮಾಡಲು ಯೋಗ್ಯ ಮತ್ತು 2012-13 ನೇ ಸಾಲಿನ ಅಧ್ಯಕ್ಷರಾಗಿ ಅಭಯಕುಮಾರ್ ಜೈನ್ ಕಾರ್ಯದರ್ಶಿಯಾಗಿ ಹರಿಪ್ರಸಾದ್ ದೇವಾಡಿಗ ಕೋಶಾಧಿಕಾರಿಯಾಗಿ ಅಶ್ರಫ್ ಅಧಿಕಾರ ಸ್ವೀಕರಿಸಿದ ವರ್ಷ ನಮ್ಮ ಸದಸ್ಯರ ಸಂಖ್ಯೆ ಸುಮಾರು 60 ರ ಗಡಿ ದಾಟಿತ್ತು.
      18-08-12 ರಂದು ವಿಶ್ವಛಾಯಾಗ್ರಹಣ ದಿನ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯ್ಕ ಸ್ಮಾರಕ ಆಳ್ವಾಸ್ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶೇಷ ಮಕ್ಕಳೊಡನೆ ಬೆರೆತು ಆ ದಿನವನ್ನು ಅವರೊಡನೆ ಕಳೆದು, ಆ ಮಕ್ಕಳಿಗಾಗಿ ಆಟೋಟ ಸ್ಪರ್ಧೆ ನಡೆಸಿ ಅವರೊಡನೆ ಸಹಭೋಜನ ನಡೆಸಿದ್ದು ವಿಶೇಷ ಅನುಭವವನ್ನು ತಂದುಕೊಟ್ಟಿತು.
      ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ನಮ್ಮ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಬಹಳ ಯಶಸ್ವಿಯಾಗಿ ನಮ್ಮ ವಲಯವು ಆಯೋಜಿಸಿತ್ತು. ಉದಯ ಕಲರ್ - ಲ್ಯಾಬ್ ಬೆಂಗಳೂರು ನಮ್ಮ ಸದಸ್ಯರಿಗೆ ಟೀ ಶರ್ಟ್ ಕೊಡುಗೆ ನೀಡಿ ನಮ್ಮ ಸದಸ್ಯರನ್ನು ಪ್ರೋತ್ಸಾಹಿಸಿತ್ತು. ಆರಂಭಿಕ ಯಶಸ್ಸಿನ ನಂತರ 2013-14 ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ವಿಲ್ಫ್ರೆಡ್ ಮೆಂಡೋನ್ಸಾ ಕಾರ್ಯದರ್ಶಿಯಾಗಿ ಮಣೀಂದ್ರ ಕೋಶಾಧಿಕಾರಿಯಾಗಿ ಉದಯ್ ಕುಮಾರ್ ಆಯ್ಕೆಯಾಗಿದ್ದರು. ಆ ವರ್ಷದ ನಮ್ಮ ಒಟ್ಟು ಸದಸ್ಯರ ಸಂಖ್ಯೆ 68.
      ನಮ್ಮ ವಲಯವು ಸಾಮಾಜಿಕವಾಗಿ ಕೆಲಸ ಮಾಡುತ್ತಿರುವ ಅಲಂಗಾರು ಮೌಂಟ್ ರೋಜರಿ ವೃದ್ಧಾಶ್ರಮಕ್ಕೆ 2 ಕ್ವಿಂಟಲ್ ಅಕ್ಕಿ ನೀಡಿ ಅವರ ನಿಸ್ವಾರ್ಥ ಸೇವೆಯೊಂದಿಗೆ ನಾವೂ ಕೂಡಾ ಸಣ್ಣಮಟ್ಟಿಗೆ ಪಾಲುದಾರರಾಗಿದ್ದು ಒಂದು ವಿಶೇಷ ಅನುಭವ ನೀಡಿ, ನಮ್ಮ ವಲಯವು ಮುಂದೆಯೂ ಕೂಡ ಸಾಮಾಜಿಕ ಕೆಲಸ ಮುಂದುವರೆಸಲು ಪ್ರೇರಣೆ ನೀಡಿತ್ತು.

      ನಮ್ಮ ವಲಯಾಧ್ಯಕ್ಷರಾಗಿದ್ದ ವಿಲ್ಫ್ರೆಡ್ ಮೆಂಡೋನ್ಸಾ ರವರ ವಿಶೇಷ ಮುತುವರ್ಜಿಯಿಂದ ಅವರದೇ ಮುಂದಾಳತ್ವದಲ್ಲಿ ಹೊಸಬೆಟ್ಟು ಗ್ರಾಮದಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದ 2 ದಲಿತ ಕುಟುಂಬಗಳಿಗೆ ತಲಾ 2.80 ಲಕ್ಷ ವೆಚ್ಚದಲ್ಲಿ ಮೀನಾಕ್ಷಿ ಮತ್ತು ಮೀನಾ ರವರಿಗೆ ಮನೆ ನಿರ್ಮಾಣವನ್ನು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ನಡೆಸಿತ್ತು. ಅಂದು ಗುಡಿಸಲಿನ ಉಸಿರು ಕಟ್ಟಿಸುವಂತಹ ವಾತಾವರಣದಲ್ಲಿ ಇದ್ದ ಕುಟುಂಬಗಳ ಸದಸ್ಯರ ಮುಖದಲ್ಲಿ ಮಂದಹಾಸ ಮೂಡಿಸುವಲ್ಲಿ ನಮ್ಮ ವಲಯಾಧ್ಯಕ್ಷರಾಗಿದ್ದ ವಿಲ್ಫ್ರೆಡ್ ಮೆಂಡೋನ್ಸಾ ರವರ ನೇತೃತ್ವದ ನಮ್ಮ ವಲಯವು ಯಶಸ್ವಿಯಾಗಿತ್ತು. ಎರಡು ಮನೆ ನಿರ್ಮಾಣದ ಜೊತೆಗೆ ಅದೇ ಗ್ರಾಮದ ಅಂಗವಿಕಲ ಬಾಲಕನಿಗೆ ವೀಲ್ ಚೇರ್ ನೀಡಿದ್ದು ಕೂಡ ನಮ್ಮ ವಲಯದ ಸಾಮಾಜಿಕ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿತ್ತು.
      ಆ ಸಾಲಿನಲ್ಲಿ ಹೊಸಬೆಟ್ಟು ಗ್ರಾಮದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯ ಚಿಕಿತ್ಸೆಗಾಗಿ ಧನ ಸಹಾಯ ನೀಡಿದ್ದು ಕೂಡ ಗಮನಾರ್ಹ.
      ಒಳ್ಳೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ ನಮ್ಮ ವಲಯಕ್ಕೆ ಜಿಲ್ಲಾ ಸಂಘಟನೆಯ ಸಮಗ್ರ ಪ್ರಶಸ್ತಿಯನ್ನು ಕೊಟ್ಟು ಪ್ರೋತ್ಸಾಹಿಸಿ ನಮ್ಮ ವಲಯವನ್ನು ಅಭಿನಂದಿಸಿತು.
      2014-15 ರಲ್ಲಿ ಅಧ್ಯಕ್ಷರಾಗಿ ವಿಲ್ಫ್ರೆಡ್ ಮೆಂಡೋನ್ಸಾ ಪುನರಾಯ್ಕೆಯಾಗಿ, ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ಇಕ್ಬಾಲ್ ಶೇಖ್ ಆಯ್ಕೆಯಾಗಿದ್ದರು. ಆ ಸಾಲಿನಲ್ಲಿ ನಮ್ಮ ಸದಸ್ಯರ ಬಲ 78.
      ಸಮಾಜದ ಬಡ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ನಮ್ಮ ಸಮಾಜಮುಖಿ ಚಿಂತನೆಯನ್ನು ಮುಂದುವರೆಸುತ್ತಾ ಆ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಎಡಪದವಿನ ಯುವಕನಿಗೆ ವೀಲ್ ಚೇರ್ ನೀಡಿದ್ದೇವೆ. ಸದಾ ಸಭೆ ಸಮಾರಂಭಗಳಿಂದ ಸುಸ್ತಾಗಿದ್ದ ನಮ್ಮ ಸದಸ್ಯರಲ್ಲಿ ಮತ್ತೆ ಉತ್ಸಾಹ, ಹುಮ್ಮಸ್ಸು ಹುರಿದುಂಬಿಸಲು ನಮ್ಮ ವಲಯವು ಮಲ್ಪೆ ದ್ವೀಪಕ್ಕೆ ಪ್ರವಾಸ ಕೈಗೊಂಡು ಸಂಭ್ರಮಿಸಿದ್ದು ನಮ್ಮ ವಲಯದ ಸದಸ್ಯರ ಒಗ್ಗಟ್ಟಿಗೆ ಸಾಕ್ಷಿಯಾಯಿತು.
      ನಮ್ಮ ಸಂಘಟನೆಯ ಹಿರಿಯ ಸದಸ್ಯರಾಗಿದ್ದ ತಾರಾನಾಥ್ ರಾವ್ ಅವರು ಹೃದಯಾಘಾತದಿಂದ ಮರಣ ಹೊಂದಿದ್ದು ಅವರ ಕುಟುಂಬಕ್ಕೆ ಮಾತ್ರವಲ್ಲದೆ, ನಮಗೂ ಕೂಡ ತುಂಬಲಾರದ ನಷ್ಟವಾಗಿದೆ. ಅವರ ಮರಣಾನಂತರ ಅವರ ಕುಟುಂಬದ ಸದಸ್ಯರಿಗೆ ಸುಮಾರು 25000/- ರೂ ಜಿಲ್ಲಾ ಘಟಕದ ಸಹಯೋಗದೊಂದಿಗೆ ಧನ ಸಹಾಯವನ್ನು ಮಾಡಿ ಕುಟುಂಬ ವಾತ್ಸಲ್ಯದ ಹಿರಿಮೆಯನ್ನು ಮೆರೆಯಿತು.
      2014-15 ರಲ್ಲಿ ಎರಡನೇ ಬಾರಿಯ ಅಧ್ಯಕ್ಷರಾಗಿ ವಿಲ್ಫ್ರೆಡ್ ಮೆಂಡೋನ್ಸಾ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ಇಕ್ಬಾಲ್ ಶೇಖ್ ಆಯ್ಕೆಯಾಗಿದ್ದಾರೆ. ಆ ವರ್ಷದಲ್ಲಿ 78 ಸದಸ್ಯರು ಒಳಗೊಂಡಿದ್ದಾರೆ.
      ನಮ್ಮ ಈ ವರ್ಷದಲ್ಲಿ ಮೂಡುಬಿದಿರೆ ವಲಯವು ವಿಶ್ವ ಛಾಯಾಚಿತ್ರ ದಿನಾಚರಣೆಯ ಅಂಗವಾಗಿ ಸಮಾಜದ ಜನರ ಕಣ್ಣೀರನ್ನು ಒರೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮೂಡುಬಿದಿರೆ ಆಸುಪಾಸಿನ ಬಡ ಅಂಗವಿಕಲ ಕುಟುಂಬವನ್ನು ಗುರುತಿಸಿ 6 ಬಡ ಅಂಗವಿಕಲ ಸದಸ್ಯರಿಗೆ ತಲಾ 5,000 ರೂಪಾಯಿಯಂತೆ ಸಹಾಯಧನ ನೀಡಿದ್ದೇವೆ.
      ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ.) ದ.ಕ ಮತ್ತು ಉಡುಪಿ ಜಿಲ್ಲೆ ಇದರ ರಜತ ಮಹೋತ್ಸವದ ಅಂಗವಾಗಿ ಮೂಡುಬಿದಿರೆ ವಲಯವು ಸಾದರ ಪಡಿಸಿದ ಜಿಲ್ಲಾ ಮಟ್ಟದ ಜಾನಪದ ನೃತ್ಯ ವೈವಿಧ್ಯ ಸ್ಪರ್ಧೆ ಹಾಗೂ ಪದಪ್ರಧಾನ ಸಮಾರಂಭ 29-09-2015 ಸಮಾಜ ಮಂದಿರ ಮೂಡುಬಿದಿರೆಯಲ್ಲಿ ನಡೆಯಿತು.
      2015-16 ರ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಯಾಗಿ ಸುನೀಲ್ ಕೋಟ್ಯಾನ್, ಕೋಶಾಧಿಕಾರಿಯಾಗಿ ರಾಜೇಶ್ ಎಸ್. ಅಮೀನ್ ಆಯ್ಕೆಯಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ 70 ಸದಸ್ಯರು ಇದ್ದಾರೆ.
      ನಮ್ಮ ಸಾಮಾಜಿಕ ಕಾಳಜಿಯ ಮುಂದುವರೆದ ಭಾಗವಾಗಿ ಹೊಸ್ಮಾರಿನ ದಿನಕರ ಪೂಜಾರಿಯವರಿಗೆ 2 ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅದರ ಚಿಕಿತ್ಸೆಗಾಗಿ ನಮ್ಮ ಮೂಡುಬಿದಿರೆ ವಲಯವು 5,000 ರೂಪಾಯಿ ಸಹಾಯ ಧನ ನೀಡಿದೆ.

Show more (+)

ಮೂಡುಬಿದಿರೆ ವಲಯವನ್ನು ಮುನ್ನಡೆಸಿದ ಅಧಿಕಾರಿಗಳು

    flag
     ಶ್ರೀ. ಎ. ಬಾನುಪ್ರಕಾಶ್ ರಾವ್
       
flag
ಶ್ರೀ. ಅಭಯ್ ಕುಮಾರ್ ಜೈನ್
      
flag
ಶ್ರೀ. ವಿಲ್ಫ್ರೆಡ್ ಮೆಂಡೋನ್ಸಾ.
          
flag
ಶ್ರೀ. ಸಂತೋಷ್ ಕುಮಾರ್ ಶೆಟ್ಟಿ.
       

ಚಿತ್ರಸಂಪುಟ

ವಲಯದ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳು.