ತುಳುನಾಡಿನಲ್ಲಿ ವೀರರಾಣಿಯಾಗಿ ಮೆರೆದು, ಈ ಮಣ್ಣಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನನ್ನೇ ಸಮರ್ಪಿಸಿಕೊಂಡ ರಾಣಿ ಅಬ್ಬಕ್ಕ ಮೆಟ್ಟಿದ ಗಂಡು ನೆಲವೇ ಉಳ್ಳಾಲ... ಕಡಲ ತಡಿಯಲ್ಲಿರುವ ಈ ಪ್ರದೇಶದಲ್ಲಿ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ವೃತ್ತಿಯನ್ನು ಇದೀಗ ನೂರಾರು ಜನ ಅವಲಂಭಿಸಿದ್ದು, ಈ ಬಗ್ಗೆ ಇಲ್ಲಿನ ಹಿರಿಯ ಛಾಯಾಗ್ರಾಹಕರಲ್ಲಿ ತಮ್ಮಲ್ಲೇ ಯಾಕೆ ಒಂದು ವಲಯವನ್ನು ಹುಟ್ಟು ಹಾಕಬಾರದು ಎಂಬ ಚಿಂತನೆ ಬಂದಾಗ ಹುಟ್ಟಿಕೊಂಡ ವಲಯವೇ ಉಳ್ಳಾಲ ವಲಯ. ಎಸ್.ಕೆ.ಪಿ.ಎ ಇದರ 14 ನೇ ವಲಯವಾಗಿ ದಿನಾಂಕ ಆಗಸ್ಟ್ 14, 2013 ರಂದು ನಮ್ಮ ಜಿಲ್ಲಾಧ್ಯಕ್ಷರಾದ ಶ್ರೀ ವಾಸುದೇವರಾವ್ ಇವರ ಅಮೃತ ಹಸ್ತದಲ್ಲಿ ದೀಪ ಪ್ರಜ್ವಲನೆಗೊಂಡು ಮೂರ್ತ ರೂಪ ಪಡೆಯಿತು, ಹೆಮ್ಮೆಯ ನಮ್ಮ ಉಳ್ಳಾಲ ವಲಯ. ಜಿಲ್ಲೆಯ ಮಾಜಿ ಜಿಲ್ಲಾಧ್ಯಕ್ಷರುಗಳಾದ ಶ್ರೀ ಶಿವರಾಮ ಕಡಬ, ಶ್ರೀ ಅಶೋಕ್ ಶೆಟ್ಟಿ, ಶ್ರೀ ಕರುಣಾಕರ ಕಾನಂಗಿ, ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ರೈ ಪಾಂಜಾಳ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ವಿಠಲ ಚೌಟ, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷರಾದ ದಾಮೋದರ ಆಚಾರ್ಯ ಹಾಗೂ ಜಿಲ್ಲಾ ಸಮಿತಿಯ ಗೌರವಾನ್ವಿತ ಸದಸ್ಯರು ಮತ್ತು ಇನ್ನಿತರ ಪದಾಧಿಕಾರಿಗಳು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. "ಹಳೇಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬ ಕವಿವಾಣಿಯಂತೆ ಅಂತಾರಾಷ್ಟ್ರೀಯ ಛಾಯಾಗ್ರಾಹಕ ದಿನಾಚರಣೆಯ ಸಂದರ್ಭ ನಮ್ಮ ವಲಯ ವ್ಯಾಪ್ತಿಯಲ್ಲಿರುವ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಿ ಗೌರವಿಸಿದ್ದೇವೆ. ನವಮಂಗಳೂರು ಬಂದರಿನ ರೂವಾರಿ ಯು. ಶ್ರೀನಿವಾಸ್ ಮಲ್ಯ ಇವರ ಜನ್ಮ ದಿನಾಚರಣೆಯ ಜತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ಅಶಕ್ತರಿಗೆ ಸಹಾಯ ಮತ್ತು ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಅಕ್ಷರ ಸಂತ ಹರೇಕಳ ಹಾಜಬ್ಬ, ಪರಿಸರ ಪ್ರೇಮಿ ಮಧುಕರ ಉಳ್ಳಾಲ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಅಧ್ಯಾಪಕ ಡಿ.ಎನ್. ರಾಘವ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ನಮ್ಮ ಪರಿಸರದ ವಿದ್ಯಾರ್ಥಿನಿ ಮನ್ವಿತ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರನ್ನು ಗುರುತಿಸಿ ಗೌರವಿಸಿದ್ದೇವೆ. ಮಕ್ಕಳ ದಿನಾಚರಣೆಯ ಅಂಗವಾಗಿ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಗ್ರಾಮಗಳ ಅಂಗನವಾಡಿ ಮಕ್ಕಳಿಗಾಗಿ ವಿವಿಧ ಸ್ಪರ್ಧಾವಳಿಗಳನ್ನು ಆಯೋಜಿಸಿರುತ್ತೇವೆ.
ಉಳ್ಳಾಲ ಬೈಲು ನವೋದಯ ಸಂಘದವರು ನಡೆಸಿದ ಉಚಿತ ವೈದ್ಯಕೀಯ ಶಿಬಿರದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈದ್ಯರು ಬುದ್ಧಿ ಮಾಂದ್ಯ ಹಾಗೂ ಅಂಗವಿಕಲರಿಗಾಗಿ ನೀಡುವ ವೈದ್ಯಕೀಯ ದೃಢೀಕರಣ ಪತ್ರಕ್ಕಾಗಿ ಉಚಿತ ಛಾಯಾಚಿತ್ರವನ್ನು ತೆಗೆದು ಕೊಟ್ಟಿರುತ್ತೇವೆ. "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂಬ ದಾಸ ವಾಣಿಯಂತೆ ಶಿಕ್ಷಕರ ದಿನಾಚರಣೆಯ ಸಂದರ್ಭ ವಲಯ ವ್ಯಾಪ್ತಿಯಲ್ಲಿರುವ ನಿವೃತ್ತ ಅದ್ಯಾಪಕರುಗಳಿಗೆ ಅವರ ಸ್ವ ಗ್ರಹದಲ್ಲಿಯೇ ಸನ್ಮಾನಿಸಿ ಗೌರವಿಸುವ ಮೂಲಕ ನಮ್ಮ ವಲಯವು ಇತರ ಸಂಘ ಸಂಸ್ಥೆಗಳಿಗೆ ಹೊಸ ಪ್ರೇರಣೆಯನ್ನು ನೀಡಿದೆ. ಛಾಯಾಗ್ರಾಹಕರಲ್ಲಿ ಶಿಸ್ತು, ನೈತಿಕ ಸ್ಥೈರ್ಯ ಹಾಗೂ ಭರವಸೆಯನ್ನು ಮೂಡಿಸುವ ಸಲುವಾಗಿ "ಉತ್ಕರ್ಷ ಹಂಬಲ" ಎಂಬ ವಿನೂತ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಶಿಬಿರದಲ್ಲಿ ಜೇಸಿಯ ರಾಷ್ಟ್ರೀಯ ತರಬೇತುದಾರರಾದ ಶ್ರೀ ರಾಜೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪಯುಕ್ತ ಸಲಹೆ ಮಾರ್ಗದರ್ಶನವನ್ನು ನೀಡಿದರು. ಛಾಯಾಗ್ರಾಹಕರಲ್ಲಿ ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಖ್ಯಾತ ಛಾಯಾಚಿತ್ರಗ್ರಾಹಕರಾದ ಅಸ್ಟ್ರೋ ಮೋಹನ್ ಮತ್ತು ವಿವೇಕ್ ಸಿಕ್ವೇರ ಇವರುಗಳು ಈ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ. ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಜತೆಗೆ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಸ್ತ್ರ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದೇವೆ. ಎಸ್.ಕೆ.ಪಿ.ಎ.ಯ ವಿವಿಧ ವಲಯಗಳ ವತಿಯಿಂದ ಆಯೋಜನೆಗೊಳ್ಳುತ್ತಿರುವ ಕ್ರೀಡಾಕೂಟಗಳಲ್ಲಿಯೂ ನಮ್ಮ ವಲಯದ ಸದಸ್ಯರುಗಳು ಭಾಗವಹಿಸಿರುತ್ತಾರೆ. "ಛಾಯಾಚಿತ್ರಣಕ್ಕೂ ಸೈ... ಸಾಂಸ್ಕೃತಿಕ ವೈವಿಧ್ಯಕ್ಕೂ ಜೈ" ಎಂಬಂತೆ ಕಳೆದ ಎರಡು ವರ್ಷಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸತತವಾಗಿ ನಾಲ್ಕು ಬಾರಿ ಪ್ರಥಮ ಸ್ಥಾನಗಳನ್ನು ಪಡೆದಿರುವುದು ನಮ್ಮ ವಲಯದ ದೊಡ್ಡ ಹೆಮ್ಮೆ... ಎಸ್.ಕೆ.ಪಿ.ಎ. ಯ ರಜತ ಮಹೋತ್ಸವದ ಅಂಗವಾಗಿ ಪುತ್ತೂರು ವಲಯದ ವತಿಯಿಂದ ನಡೆದ ಸಾಂಸ್ಕೃತಿಕ ನೃತ್ಯ ವೈಭವ, ಮಂಗಳೂರು ವಲಯದ ವತಿಯಿಂದ ನಡೆದ ತುಳು ಹಾಸ್ಯ ಸ್ಪರ್ಧೆ ಹಾಗೂ ಮೂಡುಬಿದಿರೆ ವಲಯದ ವತಿಯಿಂದ ನಡೆದ ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಗೆದ್ದು ನಮ್ಮ ವಲಯವು ಹೊಸ ದಾಖಲೆಗೆ ಮುನ್ನುಡಿ ಬರೆದಿದೆ.