ಉಡುಪಿ ವಲಯ ನಡೆದು ಬಂದ ಹಾದಿ...

      ಉಡುಪಿ ಶ್ರೀಕೃಷ್ಣನ ನಾಡೆಂದೆ ಪ್ರಸಿದ್ಧಿಯಾಗಿರುವ ಈ ಪ್ರದೇಶಕ್ಕೆ ದಿನಂಪ್ರತಿ ಸಾವಿರಾರು ಭಕ್ತರು ಭೇಟಿ ನೀಡುವ ಪುಣ್ಯ ಸ್ಥಳ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದರೆ, ಪೂರ್ವದ ಮಣಿಪಾಲ ವಿದ್ಯಾಕ್ಷೇತ್ರಕ್ಕೆ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೆಸರುವಾಸಿಯಾದ ಸ್ಥಳ. ಈ ಎಲ್ಲದರ ನಡುವೆ ಶಿಸ್ತಿನಿಂದ ಬದುಕುವ ಜನಾಂಗ ಇಲ್ಲಿಯ ವಿಶೇಷ.
      ಸುಮಾರು ನಲವತ್ತು ವರ್ಷಗಳ ಹಿಂದೆ ಉಡುಪಿಯಲ್ಲಿ ಕೇವಲ ಬೆರಳಣಿಕೆಯಷ್ಟೆ ಛಾಯಗ್ರಾಹಕ ಸ್ಟುಡಿಯೋಗಳಿದ್ದವು, ಅವುಗಳಲ್ಲಿ ಗುರುಕೃಪ ಸ್ಟುಡಿಯೋ, ಐಡಿಯಲ್ ಸ್ಟುಡಿಯೋ, ಅರುಣ ಸ್ಟುಡಿಯೋ, ಈಸ್ಟರ್ನ್ ಆರ್ಟ್ ಸ್ಟುಡಿಯೋ, ರತನ್ ಸ್ಟುಡಿಯೋ, ಚೇತನಾ ಸ್ಟುಡಿಯೋ, ಆಶಾ ಸ್ಟುಡಿಯೋ, ಸಾಧನ ಸ್ಟುಡಿಯೋ, ನಿತ್ಯಾರ್ಟ್ ಸ್ಟುಡಿಯೋ ಹಾಗೂ ಆನಂದ್ ಸ್ಟುಡಿಯೋ ಇತ್ಯಾದಿ ಉತ್ತಮ ರೀತಿಯ ಸೇವೆ ನೀಡುತ್ತಿದ್ದವು. ಅಂದು ಕಪ್ಪು ಬಿಳುಪು ಛಾಯಾಗ್ರಹಣದ ದಿನ. ಒಬ್ಬರಿಂದೊಬ್ಬರು ಛಾಯಾಗ್ರಹಣದಲ್ಲಿ ನಿಪುಣರೆ. ಕಾಲಚಕ್ರ ತಿರುಗಿದಂತೆ ಬಣ್ಣದ ಛಾಯಗ್ರಹಣ ಜನ್ಮತಾಳಿತು. ಇದರ ಹಿಂದೆಯೆ ಛಾಯಗ್ರಾಹಕರ ಸಂಖ್ಯೆಯು ಬೆಳೆಯತೊಡಗಿತು. ಈ ಬೆಳವಣಿಗೆಯ ತೀವ್ರತೆ ಎಷ್ಟಿತ್ತೆಂದರೆ ಕೇವಲ ಹತ್ತು-ಹದಿನೈದು ವರ್ಷಗಳಲ್ಲಿ ಹಲವಾರು ಸಂಖ್ಯೆಯಲ್ಲಿ ಛಾಯಗ್ರಾಹಕರು ತಮ್ಮ ತಮ್ಮ ಉದ್ದಿಮೆಯನ್ನು ಪ್ರಾರಂಭಿಸಿದರು. ಆದರೆ ಇಲ್ಲಿ ಪ್ರಾರಂಭವಾಯಿತು ಧರದ ಪೈಪೋಟಿ. ಈ ಪೈಪೋಟಿಯಿಂದ ನಮ್ಮ ಛಾಯಗ್ರಾಹಕರ ಆತ್ಮೀಯತೆಯು ಕೂಡ ಕುಸಿಯುತ್ತ ಬಂತು. ಒಂದೆ ವೇದಿಕೆಯಲ್ಲಿ ಛಾಯಾಗ್ರಹಣ ಮಾಡುವ ಇಬ್ಬರು ವ್ಯಕ್ತಿಗಳು ಒಬ್ಬನ ಮುಖ ಇನ್ನೊಬ್ಬ ನೋಡದ ಪರಿಸ್ಥಿತಿ ಒದಗಿಬಂತು. ಈ ಸಮಸ್ಯೆಯ ಪರಿಹಾರಕ್ಕಾಗಿ ಸಂಘಟನೆ ಅನಿವಾರ್ಯವಾಗಿತ್ತು. ಇದೇ ಹೊತ್ತಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್.ಬಿ.ಸನಿಲ್, ಜೆ.ಮೋಹನ್, ಎಚ್.ಆರ್.ವಸಂತ್, ಜನಾರ್ಧನ್, ವಿಠ್ಠಲ್ ಚೌಟ, ಶಾಂತರಾಮ್ ಬಾಲ್ಕೋ, ಕರುಣಾಕರ್, ಪ್ರಕಾಶ್ ಅಲೆವೂರಾಯ, ಸಂಜೀವ ಕಂಕನಾಡಿ, ಕೀರ್ತಿ ಮಂಗಳೂರು, ನವೀನ್ ಕುದ್ರೋಳಿ, ಡೆನ್ನಿಸ್ ರೇಗೋ, ಜಯಕರ್ ಸಮರ್ಥ, ಎಂಬ ಹದಿಮೂರು ಜನರ ಒಂದು ತಂಡ ಛಾಯಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಒಂದು ಸಂಘಟನೆಯನ್ನು ಹುಟ್ಟು ಹಾಕಿತು. ಅದೇ ಇಂದು ರಾಜ್ಯಾದ್ಯಂತ ಹೆಸರು ಪಡೆದಿರುವ ಸಂಘಟನೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಷನ್.
      ಈ ಸಂಘಟನೆಯು ಸದಸ್ಯರ ಏಳಿಗೆಗಾಗಿ ಉಭಯ ಜಿಲ್ಲೆಗಳ ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಸದಸ್ಯರನ್ನು ಸಂಪರ್ಕಿಸಿ ಸಂಘಟನೆಯನ್ನು ಬಲಗೊಳಿಸುವಲ್ಲಿ ಸಫಲರಾದರು. ಈ ಸಂಘಟನೆಯಲ್ಲಿ ಉಡುಪಿ ಕೂಡ ಒಂದು. ಪ್ರಾರಂಭ ಹಂತದಲ್ಲಿ ಕೆಲವೇ ಸದಸ್ಯರನ್ನು ಒಳಗೊಂಡ ಈ ಸಂಘಟನೆ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗಿ ಬಂತು. ಆದರೆ ಬೆಂಬಿಡದ ನಮ್ಮ ಮಾತೃಸಂಸ್ಥೆಯ ಸದಸ್ಯರ ಒತ್ತಡದ ಹಿನ್ನೆಲೆಯಲ್ಲಿ ಮುಂದೆ ಈ ಸಂಘಟನೆ ಒಂದು ಮಾದರಿ ಸಂಘಟನೆಯಾಗಿ ಬೆಳೆದು ನಿಂತಿರುವುದು ಇದರ ಹಿಂದೆ ಶ್ರಮಿಸಿದ ನಮ್ಮ ಸಂಘಟನಾ ಸದಸ್ಯರ ಶ್ರಮದ ಫಲ ಎಂದೆ ಹೇಳಬಹುದು.

      ಸುಮಾರು 22 ವರ್ಷಗಳ ಹಿಂದೆ ನಮ್ಮ ಉಡುಪಿ ವಲಯ ಪ್ರಾರಂಭವಾಯಿತು. ಉಡುಪಿ ವಲಯದ ಸ್ಥಾಪಕ ಅಧ್ಯಕ್ಷರಾಗಿ ಚೇತನಾ ಸ್ಟುಡಿಯೋ ರಾಘವ ಪದ್ಮಾಶಾಲಿಯವರ ನೇತೃತ್ವದಲ್ಲಿ ಸಂಘವು ತನ್ನ ಚಟುವಟಿಕೆಯನ್ನು ಪ್ರಾರಂಭಿಸಿತು. ಉಡುಪಿಯ ವುಡ್ ಲ್ಯಾಂಡ್ ಹೋಟೆಲಿನ ಮಾಳಿಗೆಯಲ್ಲಿ ನಮ್ಮ ವಾರ್ಷಿಕ ಸಭೆಯನ್ನು ಮಾಡುತ್ತಿದ್ದು ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡು ಅದನ್ನು ಅನುಸರಿಸುವಂತೆ ಸದಸ್ಯರ ಗಮನಕ್ಕೆ ತರಲಾಗುತ್ತಿತ್ತು. ಮಾಸಿಕ ಸಭೆಯು ರಾಘವ ಪದ್ಮಾಶಾಲಿಯವರ ಸ್ಟುಡಿಯೋದಲ್ಲಿಯೇ ನಡೆಯುತ್ತಿತ್ತು. ರಾಘವ ಪದ್ಮಾಶಾಲಿಯವರ ಅಧ್ಯಕ್ಷತೆಯಲ್ಲಿ ಬೆಳೆದು ನಿಂತ ನಮ್ಮ ಉಡುಪಿ ಸಂಘಟನೆಯು ಹಿಂದೆ ತಿರುಗಿ ನೋಡದೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿತು. ಈಗಿನ ಬ್ರಹ್ಮಾವರ ವಲಯ, ಕಾಪು ವಲಯ ಕೂಡ ಉಡುಪಿ ವಲಯದಿಂದಲೇ ಬೇರ್ಪಡಿಸಿಕೊಂಡ ವಲಯಗಳು. ಸದಸ್ಯರ ಹಿತ-ಚಿಂತನೆಗಳನ್ನು ಮುಂದಿಟ್ಟುಕೊಂಡು ಒಂದು ಸುರಕ್ಷನಿಧಿಯನ್ನು ಸ್ಥಾಪಿಸಲಾಯಿತು. ಈ ಸುರಕ್ಷ ನಿಧಿಯಿಂದ ಅನೇಕ ಸದಸ್ಯ ಮಿತ್ರರು ಅಪಘಾತಕ್ಕೊಳಗಾದಾಗ, ಅನಾರೋಗ್ಯಕ್ಕೆ ಒಳಗಾದಾಗ ಸಹಾಯಧನವನ್ನು ನೀಡಿ ಅವರನ್ನು ಪ್ರೇರೇಪಿಸುತ್ತಿತ್ತು. ಪ್ರತಿಯೊಂದು ಹಳ್ಳಿ ಹಳ್ಳಿಯ ಸ್ಟುಡಿಯೋಗಳಿಗೆ ಭೇಟಿ ನೀಡಿ ಅವರನ್ನು ಸಂಘದ ಸದಸ್ಯರಾಗಲು ಹುರಿದುಂಬಿಸುವ ಕಾರ್ಯವನ್ನು ಬಹಳ ಕಟ್ಟು ನಿಟ್ಟಾಗಿ ಶ್ರಮವಹಿಸಿ ಮಾಡಿರುವುದರ ಪ್ರತಿಫಲವೇ ಇಂದು ಉಭಯ ಜಿಲ್ಲೆಯಲ್ಲಿ ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿರುವ ಏಕೈಕ ಸಂಘಟನೆಯೆಂದರೆ ಅದೇ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಷನ್ ರಿ. ದ.ಕ. ಉಡುಪಿ ಎಂದು ಹೆಮ್ಮೆಯಿಂದ ಹೇಳಬಹುದು.
      ನಂತರದ ದಿನಗಳಲ್ಲಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷರುಗಳಾದ ಬಿ ಕೃಷ್ಣ, ಜಯಕರ್ ಸುವರ್ಣ, ಗೋಕುಲ್ ದಾಸ್ ಪೈ, ಕೆ. ವಾಸುದೇವ್ ರಾವ್, ಯು.ಕೆ. ಭಾಸ್ಕರ್,ರಂಜನ್ ಕಟಪಾಡಿ, ವಿವೇಕ್ ಬಳ್ಳಾಲ್, ಪ್ರಸನ್ನ ಹೆಬ್ಬಾರ್, ಹರೀಶ್ ಶೆಟ್ಟಿ, ಶ್ರೀಧರ್ ಶೆಟ್ಟಿಗಾರ್, ಸುಂದರ್ ಪೂಜಾರಿ, ಹಾಗೂ ಸುಕುಮಾರ್ ಕುಕ್ಕಿಕಟ್ಟೆ, ಮುಂತಾದವರ ಶ್ರಮ ಹಾಗೂ ನಿಸ್ವಾರ್ಥ ಸೇವೆಯೆ ಸಂಘಟನೆಯ ಯಶಸ್ವಿಗೆ ಕಾರಣವಾಯಿತು. ಪ್ರಮುಖವಾಗಿ ಅನಧಿಕೃತ ಛಾಯಾಗ್ರಾಹಕರ ಹಾವಳಿಯನ್ನು ತಡೆಯುವಲ್ಲಿ, ಗುರುತು ಚೀಟಿಯನ್ನು ಕಡ್ಡಾಯಗೊಳಿಸುವಲ್ಲಿ ಹಾಗೂ ಸಂಘದ ಸದಸ್ಯರಿಗೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಛಾಯಗ್ರಹಣದ ಮಾಹಿತಿ ಕಾರ್ಯಗಾರವನ್ನು ಆಗಿಂದಾಗ್ಗೆ ನೀಡಿ ಸದಸ್ಯರ ಉನ್ನತಿಗೆ ಶ್ರಮಿಸಿದ ಉಡುಪಿ ವಲಯ ಪ್ರಶಂಸೆಗೆ ಪಾತ್ರವಾಗಿದೆ. ಇದರ ಹಿಂದೆ ಅನೇಕ ಸದಸ್ಯ ಕಾರ್ಯಕರ್ತರ ಶ್ರಮ-ತ್ಯಾಗವನ್ನು ನೆನಪಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ.
      ಉಡುಪಿ ವಲಯ ಸಂಘದ ಸದಸ್ಯರ ಚಿಂತನೆಯ ಜೊತೆಗೆ ಸಮಾಜಮುಖಿ ಸೇವೆಗಳನ್ನೂ ಕೂಡ ಮಾಡುತ್ತಾ ಬಂದಿದ್ದು ವಿಶೇಷ ಮಕ್ಕಳಿಗೆ ನೆರವು, ಶಂಕರಪುರದ ವಿಶ್ವಾಸದ ಮನೆಗೆ ನೆರವು, ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಭೂಕಂಪ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಯವರ ಮುಖಾಂತರ ಸಹಾಯಧನ ನೀಡುವ ಮುಖೇನ ಸಮಾಜದಲ್ಲಿಯೂ ಕೂಡ ಗುರುತಿಸಿಕೊಂಡಿದೆ. ಇನ್ನು ಮುಂದೆಯೂ ಉತ್ತಮ ಕಾರ್ಯಕ್ರಮವನ್ನು ಸಂಘದ ಸದಸ್ಯರಿಗೆ ಹಾಗೂ ಸಮಾಜಕ್ಕೆ ನೀಡುವಲ್ಲಿ ಶ್ರಮಿಸುವ ಭರವಸೆಯೊಂದಿಗೆ....
      ನಮ್ಮ ವಲಯ ಮಾಡಿದಂತಹ ಹಲವಾರು ಕಾರ್ಯಕ್ರಮಗಳಲ್ಲಿ ಕೆಲವೊಂದು ಕಾರ್ಯಕ್ರಮದ ಮತ್ತು ಸಮಾಜ ಸೇವೆಯ ಚಿತ್ರಣವನ್ನು ಈ ಕೆಳಗೆ ನೀಡಿದ್ದೇವೆ.

Show more (+)

ಉಡುಪಿ ವಲಯವನ್ನು ಮುನ್ನಡೆಸಿದ ಸಾರಥಿಗಳು.

flag

ವಾಸುದೇವ ರಾವ್

flag

ಅನೀಶ್ ಶೆಟ್ಟಿಗಾರ್

flag

ಹರೀಶ್ ಶೆಟ್ಟಿ

flag

ಜಯಕರ್ ಸುವರ್ಣ

flag

ಕೃಷ್ಣ ಮಲ್ಪೆ

flag

ಪ್ರಸನ್ನ ಹೆಬ್ಬಾರ್

flag

ರಾಘವ ಪದ್ಮಶಾಲಿ

flag

ರಂಜಾನ್ ಮೆಂಡೋಂ

flag

ಶ್ರೀಧರ್ ಶೆಟ್ಟಿಗಾರ್

flag

ಸ್ಟೀವನ್ ಸುಕುಮಾರ್

flag

ಸುಂದರ್ ಪೂಜಾರಿ

flag

ಉ .ಕೆ ಭಾಸ್ಕರ್

flag

ವಾಮನ್ ಪಡುಕೆರೆ

flag

ವಿವೇಕ್ ಬಲ್ಲಾಳ್

ಚಿತ್ರಸಂಪುಟ

ನಮ್ಮ ಸಂಘದಿಂದ ಸೇವಾ ಕಾರ್ಯಕ್ರಮಗಳು